ಫುಲ್ಲರ್, ತಾಮಸ್
1609-61. ಇಂಗ್ಲಿಷ್ ವಿದ್ವಾಂಸ, ಲೇಖಕ ಮತ್ತು ಹೆಸರಾಂತ ಪಾದ್ರಿ. ಅತ್ಯಂತ ಸ್ವಾರಸ್ಯಕರವಾಗಿ ಬರೆಯುತ್ತಿದ್ದ ಹದಿನೇಳನೆಯ ಶತಮಾನದ ಖ್ಯಾತ ಲೇಖಕರಲ್ಲಿ ಒಬ್ಬ. ಜಾಣ್ಮೆಯಿಂದ ಕೂಡಿದ ಸ್ವಾರಸ್ಯಕರವಾದ ಈತನ ಬರವಣಿಗೆಯಲ್ಲಿ ಹಾಸ್ಯ ಚುಟುಕ, ಕಥೆ ಉಪಕಥೆಗಳು ಮತ್ತು ಶ್ಲೇಕ್ಷೆ ಸಾಮಾನ್ಯವಾಗಿ ಕಂಡುಬಂದರೂ ಈತನನ್ನು ಹಳೆ ಮಾದರಿಯ ವಿಚಿತ್ರ ಬರಹಗಾರನೆಂದು ಕರೆಯುತ್ತಿದ್ದುದುಂಟು. ಹೀಗಾದ್ದರಿಂದ ಇವನ ನಿಜವಾದ ಮೇಧಾಶಕ್ತಿ ಮರೆಯಾಗಿದೆ. ಖ್ಯಾತಿವೆತ್ತ ಧರ್ಮಪ್ರಚಾರಕನಾದರೂ ಸಾಹಿತ್ಯಕ ಪ್ರಾಕಾರಗಳಲ್ಲಿ ಒಳ್ಳೆಯ ಕೃಷಿ ಮಾಡಿದ್ದಾನೆ. ಇತಿಹಾಸಕಾರನಾಗಿ ಆಳವಾದ ಸಂಶೋಧನೆಯೇನೂ ಮಾಡದಿದ್ದರೂ ಮೂಲ ಆಧಾರಗಳಿಂದ ವಿಷಯ ಸಂಗ್ರಹಣೆ ಮಾಡಿದ್ದಾನೆ. ಇದರಿಂದಾಗಿ ಇವನ ಐತಿಹಾಸಿಕ ಕೃತಿಗಳು ಇಂದೂ ಓದಲು ಯೋಗ್ಯವಾಗಿವೆ. ಕ್ರಿಶ್ಚನರ ಧಾರ್ಮಿಕ ಯುದ್ಧಕ್ಕೆ ಸಂಬಂಧಿಸಿದ ಇವನ ಹಿಸ್ಟರಿ ಆಫ್ ದಿ ಹೋಲಿ ವಾರ್ (1643) ಚಿರಸ್ಥಾಯಿಯಾದ ಮೌಲ್ಯವನ್ನು ಹೊಂದಿದೆ. ದಿ ಹೋಲಿ ಸ್ಟೇಟ್ ಅಂಡ್ ದಿ ಪೊಫೇನ್ ಸ್ಟೇಟ್ (1642)ಇನ್ನೊಂದು ಓದಬೇಕಾದ ಉದ್ಗ್ರಂಥ; ನೀತಿಯನ್ನೂ ಮನೋರಂಜನೆಯನ್ನೂ ಒಟ್ಟಿಗೆ ನೀಡುತ್ತದೆ. ಇಂಗ್ಲಿಷ್ ಪ್ರಬಂಧದ ಇತಿಹಾಸಕಾರರಿಗೂ ಮತ್ತು ಜೀವನ ಚರಿತ್ರಕಾರರಿಗೂ ಇದೊಂದು ಉಪಯುಕ್ತ ಗ್ರಂಥ. ವರ್ದೀಪ್ ಆಫ್ ಇಂಗ್ಲೆಂಡ್ (1662) ಎಂಬುದು ಇಂಗ್ಲಿಷ್ ಗಣ್ಯರ ಜೀವನಚರಿತ್ರೆ. ಈ ಪುಸ್ತಕದಲ್ಲಿ ಇಂಗ್ಲಿಷ್ ಗಣ್ಯರನ್ನು ಜಿಲ್ಲಾವಾರು ವಿಂಗಡಿಸಲಾಗಿದೆ. ಪರಾಮರ್ಶಕರಿಗೆ ಇದು ಬಹಳ ಉಪಯುಕ್ತವಾದ ಗ್ರಂಥ.

	ಫುಲ್ಲರ್ ಜನಿಸಿದ್ದು ನಾತ್ರ್ಯಾಂಪ್ಟನ್‍ಷೈರಿನ ಆಲ್ಡ್‍ವಿಂಕಲ್ ಎಂಬ ಹಳ್ಳಿಯಲ್ಲಿ. ತಂದೆ ಅಲ್ಲಿಯ ಪಾದ್ರಿ. (ಜೂನ್ 1608) 13ನೆಯ ವಯಸ್ಸಿಗೆ ಕ್ವೀನ್ಸ್ ಕಾಲೇಜು ಸೇರಿ 20ನೆಯ ವಯಸ್ಸಿಗೆ ಎಂ.ಎ. ಪದವಿ ಪೂರೈಸಿದ. 1630ರಲ್ಲಿ ಕೇಂಬ್ರಿಜ್‍ನ ಸೇಂಟ್ ಬೆನೆಟ್‍ಗೆ ಸಹಾಯಕ ಪಾದ್ರಿಯಾಗಿ ನೇಮಕಗೊಂಡ. ರಾಜ ಮತ್ತು ಪಾರ್ಲಿಮೆಂಟಿನ ಘರ್ಷಣೆಯಲ್ಲಿ ಇವನು ರಾಜನ ಪರವಾಗಿದ್ದು. 

	1649ರ ಜೂನ್ 30ರಂದು ರಾಜನಿಗೆ ಮರಣದಂಡನೆ ವಿಧಿಸಿದ ಸಂದರ್ಭ ಈತನಿಗೆ ಸಂಕಟದ ಪರಮಾವಧಿಯಾಗಿ ಕಂಡಿತು. ತನ್ನ ಚರ್ಚ್ ಇತಿಹಾಸದಲ್ಲಿ ಈ ವಿಷಯವನ್ನು ಕೂಲಂಕಷವಾಗಿ ಈತ ಉಲ್ಲೇಖಿಸಿದ್ದಾನೆ. 

	ಬಹುಶಃ 1657ರಲ್ಲಿ ಈತ ಕ್ರಾಮ್‍ವೆಲ್ ನೇಮಿಸಿದ ವಿಚಾರಣಾ ಆಯೋಗದ ಮುಂದೆ ತಾನು ಸಾರ್ವಜನಿಕ ಧರ್ಮೋಪದೇಶ ಮಾಡಲು ಯೋಗ್ಯತೆ, ಅಲ್ಲವೆ ಎಂಬ ಪರೀಕ್ಷೆಗೆ ಗುರಿಯಾಗಬೇಕಾಯಿತು. ಇಂಥ ಕಠಿಣ ಪರೀಕ್ಷೆಯಲ್ಲಿ ಈತ ಜಯಶೀಲನಾದ. ಆದರೆ ಸ್ವಲ್ಪ ಕಾಲಾನಂತರ ವಾಲ್ತಾಮ್ ಚರ್ಚಿಗೆ ರಾಜೀನಾಮೆ ಕೊಟ್ಟು ಲಂಡನ್ನಿನಲ್ಲಿ ಧರ್ಮೋಪದೇಶವನ್ನು ಮುಂದುವರಿಸಿ, ರಾಜಪ್ರಭುತ್ವದ ಪುನಃಸ್ಥಾಪನೆಯ ಸಮಯದಲ್ಲಿ ಮತ್ತೆ ಸ್ಯಾಲಿಸ್ ಕತೀಡ್ರಲ್ಲಿನಲ್ಲಿ ಧರ್ಮೋಪದೇಶಕನಾಗಿ ನಿಯಮಿಸಲ್ಪಟ್ಟು ಡಾಕ್ಟರ್ ಆಫ್ ಡಿವಿನಿಟಿ ಪದವಿ ಪಡೆದ. 1671ರಲ್ಲಿ ನಿಧನಾದ.	(ಎ.ಎಂ.ಪಿ.)

	ಫುಲರ್ ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾನೆ, ತನ್ನ ಅನಿಸಿಕೆಗಳನ್ನು ವಿಶಿಷ್ಟ ಹಾಸ್ಯದ ಲೇಪನದೊಂದಿಗೆ ನಿರೂಪಿಸುತ್ತಾನೆ ಬರಹ ಅಡಕ ಅಭಿಪ್ರಾಯಗಳಲ್ಲಿ ವಿವೇಚನೆ ಇದೆ. 1662ರಲ್ಲಿ ಪ್ರಕಟವಾದ `ದ ವರ್ದೀಸ್ ಆಫ್ ಇಂಗ್ಲೆಂಡ್ ಕೃತಿಯಲ್ಲಿ ಸ್ವಾರಸ್ಯವಾದ ಸಾಮಾಜಿಕ ಮತ್ತು ಐತಿಹಾಸಿಕ ಸಾಮಗ್ರಿಯನ್ನು ಉಳಿಸಿದ್ದಾನೆ.
(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ